ಕಾವೇರಿಗೆಂಡೆ

 ಒಂದು ಮಧ್ಯಗಾತ್ರದ ಗೆಂಡೆ ಜಾತಿಯ ಮೀನು (ಕಾರ್ಪ್). ಕಾವೇರಿನದಿಯಲ್ಲಿ ಸಿಕ್ಕುವ ಸ್ಥಳೀಯ ಜಾತಿಯ ಮೀನಾದ್ದರಿಂದ ಇದಕ್ಕೆ ಈ ಹೆಸರಿದೆ. ಕೃಷ್ಣರಾಜ ಸಾಗರದಲ್ಲಿ ಸಾಕಿ ಬೆಳೆಸುವ ಮೀನು ಜಾತಿಗಳಲ್ಲಿ ಅತಿ ಮುಖ್ಯವಾದುದು. ಇದು ಕರ್ನಾಟಕ ರಾಜ್ಯದ ಬೇರೆ ನದಿಗಳಲ್ಲಿ ದೊರಕುವುದಿಲ್ಲ ಇದರ ವೈಜ್ಞಾನಿಕ ನಾಮ ಬಾರ್ಬಸ್ ಡೂಬಿಯಸ್. ಇದಕ್ಕೆ ಮೊನಚಾದ ತಲೆ, ಸಂಕುಚಿತವಾದ ಮೂತಿ ಅಥವಾ ವಸಡಿದೆ. ಬೆನ್ನಿನ ಈಜುರೆಕ್ಕೆಯಲ್ಲಿ ಅತಿದಪ್ಪವಾದ ಮುಳ್ಳು (ರೇ) ಇದೆ. ದೇಹದ ಬಣ್ಣ ಮತ್ತು ಮೇಲೆ ನಮೂದಿಸಿದ ಗುಣಗಳಿಂದ ತನ್ನ ವರ್ಗದ ಬೇರೆ ಮೀನುಗಳಿಂದ ಭಿನ್ನವಾಗಿದೆ. ಪೂರ್ಣ ಬೆಳೆದ ಮೀನು ಸುಮಾರು 2' ಉದ್ದವಿರುತ್ತದೆ. ತೂಕ 10-11 ಪೌಂ. ಇರುವುದುಂಟು.

 ಈ ಮೀನು ಹಿಂಗಾರು ಮಳೆಯ ಕಾಲದಲ್ಲಿ ನದಿಗಳಲ್ಲಿ ವಂಶಾಭಿವೃದ್ಧಿ ಮಾಡುತ್ತದೆ. ಜನವರಿ ಮತ್ತು ಫೆಬ್ರವರಿಗಳಲ್ಲಿ ಸಣ್ಣ ಮರಿಗಳನ್ನು ಸಂಗ್ರಹಿಸಬಹುದು. ಚಿಕ್ಕ ಮರಿಗಳಿಗೆ ಅತಿ ಸೂಕ್ಷ್ಮಪ್ರಾಣಿಗಳು ಮತ್ತು ನೀರಿನ ಚಿಗಟಗಳು ಮುಖ್ಯ ಆಹಾರ. ಬೆರಳು ಗಾತ್ರಕ್ಕೆ ಬೆಳೆದಾಗ ನೊಣದ ಜಾತಿಗೆ ಸೇರಿದ ಕೀಟಗಳ ಡಿಂಭ, ನಾರುವಸ್ತು ಮತ್ತು ಮಣ್ಣನ್ನು ತಿನ್ನುತ್ತವೆ. ದೊಡ್ಡವಾದಾಗ ನೀರಿನಲ್ಲಿರುವ ಪಾಚಿಯೇ ಆಹಾರ. ಮರಿಗಳನ್ನು ಕೆರೆಗಳಲ್ಲೂ ಬೆಳೆಸಬಹುದು. ಕಾವೇರಿಗೆಂಡೆ ಉತ್ತಮವಾದ ಆಹಾರ ಮೀನೆಂದು ಹೆಸರಾಗಿದೆ.

(ಬಿ.ಎನ್.)

(ಪರಿಷ್ಕರಣೆ: ಡಾ|| ಎನ್. ಎಸ್. ಲೀಲಾ)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ